ನಾಗೇಶ
	17ನೆಯ ಶತಮಾನದ ಮರಾಠೀ ಕವಿ. ಶಿವಾಜಿಯ ಕಾಲದ ಪ್ರಸಿದ್ಧ ಕವಿಗಳಲ್ಲೊಬ್ಬ. ನಾಗದೇವ, ನಾರಜೋಶೀ, ನಾಗೇಂದ್ರ-ಎಂದೂ ಈತನನ್ನು ಕರೆವುದಿದೆ. ಈತ ವತ್ಸಗೋತ್ರದ ಮಾಧ್ಯಂದಿನ ಶಾಖೆಯ ಯಜುರ್ವೇದಿಯ ಬ್ರಾಹ್ಮಣ. ಕುಲದೇವತೆ ತ್ರಿಭಾಂಡೇಶ್ವರ. ಈತನ ಊರು ಮಹಾರಾಷ್ಟ್ರ ರಾಜ್ಯದ ನಗರ ಜಿಲ್ಲೆಯ ಭಿಂಗರ್ ಗ್ರಾಮ. ಅಂತೆಯೆ ಭಿಂಗಾರ್‍ಕರ್ ಎನ್ನುವುದು ಈತನ ಉಪನಾಮ. ತಂದೆ ಮೋರಜೋಶೀ. ತಾಯಿ ಜಾನಕೀಬಾಯಿ. ಭಿಂಗರ್ ಗ್ರಾಮದ ಜೋಯಿಸಗಿರಿ ಹಾಗೂ ಕುಲಕರ್ಣಿಕೆ ವಂಶಪಾರಂಪರ್ಯವಾಗಿ ಬಂದ ವೃತ್ತಿಗಳು. ನಗರ ಪ್ರಾಂತದಲ್ಲಿ ಆಗಿಹೋದ ಕೋಟಾ ಮನೆತನದ ಪ್ರಸಿದ್ಧ ಸರದಾರ್ ಯಶವಂತರಾವ್ ಎಂಬುವವರ ಆಶ್ರಯವೂ ಇದ್ದಿತೆಂದು ವದಂತಿ. ಸೀತಾಸ್ವಯಂವರ, ರುಕ್ಮಿಣೀಸ್ವಯಂವರ, ಚಂದ್ರಾವಳೀವರ್ಣನ, ರಸಮಂಜರೀ, ಶಾರದಾವಿನೋದ ಮುಂತಾದವು ಈತನ ಕೃತಿಗಳು. ಇವುಗಳಲ್ಲಿ ಸೀತಾಸ್ವಯಂವರ ಹಾಗೂ ಚಂದ್ರಾವಳೀವರ್ಣನಗಳು ಮಾತ್ರ ಉಪಲಬ್ಧ.

	ಕವಿ ಬಹುಶ್ರುತ. ಈತನ ಚಂದ್ರಾವಳೀವರ್ಣನ ಕಾವ್ಯ ಅಗ್ನಿಪುರಾಣವನ್ನು ಆಧರಿಸಿದ್ದು ಸೀತಾಸ್ವಯಂವರ ಕಾವ್ಯ ಕಾಳಿದಾಸನ ರಘುವಂಶ, ಹನೂಮನ್ನಾಟಕ ಇತ್ಯಾದಿಗಳನ್ನು ಅವಲಂಬಿಸಿದ್ದು.			
	(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ